ಬೀಷಾ, ಮೇರಿಫ್ರಾಂಕೊ ಕ್ಸೇವಿಯರ್ 1771-1802. ಅಂಗಾಂಶ ವಿಜ್ಞಾನಕ್ಕೆ (ಹಿಸ್ಟಾಲಜಿ) ಬುನಾದಿ ಹಾಕಿದ ದೇಹರಚನಾ ವಿಜ್ಞಾನಿ. ದೇಹ ಕಾರ್ಯ ವಿಜ್ಞಾನಿಯೂ ಹೌದು. ಫ್ರಾನ್ಸಿನ ಥೊಯರೆ ಎಂಬಲ್ಲಿ 1771 ನವೆಂಬರ್ 11 ರಂದು ಜನನ. ತಂದೆ ವೈದ್ಯ. ಹೀಗಾಗಿ ಮಗನ ಆಸಕ್ತಿ ಈ ಕಡೆ ವಾಲಿತು. ದೇಹರಚನಾ ವಿಜ್ಞಾನದಲ್ಲಿ ಸಂಶೋಧನೆ ಈತನ ಕಾರ್ಯಕ್ಷೇತ್ರ. ಆರುನೂರಕ್ಕಿಂತಲೂ ಹೆಚ್ಚು ಶವಪರೀಕ್ಷೆ ಮಾಡಿ ಅಂಗಗಳು ಕಾರ್ಯ ದೃಷ್ಟಿಯಿಂದ ಬಹುವಿಧವಾಗಿ ಬೇರೆ ಬೇರೆಯಾಗಿ ಕಂಡರೂ ರಚನೆಯ ದೃಷ್ಟಿಯಿಂದ ಕೇವಲ ಕೆಲವೇ ರೀತಿಯವು ಎಂಬುದನ್ನು ಪ್ರಕಟಿಸಿದ. ರಚನೆಯ ವೈಶಿಷ್ಟ್ಯದ ದೃಷ್ಟಿಯಲ್ಲಿ ಬೇರೆ ಬೇರೆಯಾದ ಕೋಶಗಳಿಂದ ಬೇರೆ ಬೇರೆ ಅಂಗಾಂಶಗಳು ಅಥವಾ ಊತಕಗಳು (ಟಿಶ್ಯೂಸ್) ಮತ್ತು ಈ ವಿವಿಧ ಅಂಗಾಂಶಗಳಿಂದ ಎಲ್ಲ ಅಂಗಗಳು ರೂಪುಗೊಂಡಿವೆ ಎಂಬುದನ್ನು ವಿವರಿಸಿದ. ಆಗ ಹೆಚ್ಚು ಹೆಚ್ಚು ಬಳಕೆಗೆ ಬರುತ್ತಲಿದ್ದ ಸೂಕ್ಷ್ಮದರ್ಶಕವನ್ನು ಬಳಸದೆಯೆ 21 ಅಂಗಾಂಶಗಳನ್ನು ಗುರುತುಹಿಡಿದ. ದೇಹರಚನೆ ಅಭ್ಯಾಸ ಮಾಡಲು ಅಂಗಾಂಶಗಳ ಆಧ್ಯಯನ ಎಂದು ತೋರಿಸಿ ಅಂಗಾಂಶವಿಜ್ಞಾನಕ್ಕೆ ತಳಪಾಯ ಹಾಕಿದ.

	ಖಾಯಿಲೆಯಿಂದ ಅಂಗೋಪಾಂಗಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಈತ ಕೂಡ ಸಂಶೋಧನೆ ನಡೆಸಿದ. ದೇಹದೊಳಗೆ ರಸಗಳು ನಡುವೆ ತಾಳೆ ತಪ್ಪುವುದೇ ಖಾಯಿಲೆಗೆ ಕಾರಣ ಎಂಬ ಪ್ರಚಲಿತ ನಂಬಿಕೆಯನ್ನು ತಿರಸ್ಕರಿಸಿದ. ದೇಹ ಕಾರ್ಯಗಳಿಗೆ ಜೀವನ ಅಂತಸ್ಸತ್ತ್ವ (ಸ್ಟಿರಿಟ್ ಆಫ್ ಲೈಫ್) ಬೇಕು ಎಂಬುದಾಗಿ ಸ್ಟಾಲ್ ಮಂಡಿಸಿದ ವಾದವನ್ನು ಈತ ಒಪ್ಪಲಿಲ್ಲ. ಈತನ ಸ್ಪಷ್ಟ, ನಿರ್ದಿಷ್ಟ ಮತ್ತು ಪ್ರಾಯೋಗಿಕ ಮಾರ್ಗಗಳು ಈ ಅಂಗಾಂಶ ವಿಜ್ಞಾನದ ಸಂಶೋಧನೆಯಲ್ಲಿ ಗುರುತುಗಲ್ಲುಗಳು. 

	ಬೀಷಾ ಬರೆದಿರುವ ಗ್ರಂಥಗಳ ಪೈಕಿ ಈತನ ಗುರುವಿನ ಜೀವನ ಚರಿತ್ರೆಯೂ ಸೇರಿದೆ. ಈತನ ಸಂಶೋಧನೆಗಳೆಲ್ಲವೂ ಅಡಕವಾಗಿರುವ ಅನಾಟಮಿ ಡಿಸ್ಕ್ರಿಪ್ಟಿವ್ ಎಂಬ ಐದು ಸಂಪುಟಗಳ ಉದ್ಗ್ರಂಥ ಉಲ್ಲೇಖಾರ್ಹವಾದದು. ಈ ಗ್ರ್ರಂಥ ಮುಗಿಯುವ ಮೊದಲೇ ಈತ ತೀರಿಹೋದದ್ದರಿಂದ (22-7-1902) ಈತನ ಶಿಷ್ಯರುಗಳಾದ ಎಂ.ಎಫ್.ಆರ್.ಬೂಸನ್ ಮತ್ತು ಪಿ.ಜೆ.ರೊ ಅವರುಗಳಿಂದ ಇದು ಪೂರ್ಣವಾಯಿತು. 							
	(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ